ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಮುನ್ನುಡಿ

ಪ್ರಪಂಚದಾದ್ಯಂತ ನ್ಯಾಯಾಲಯಗಳ ತೀರ್ಪುಗಳಲ್ಲಿ ನ್ಯಾಯ ವಿಜ್ಞಾನದ ಪ್ರಾಮುಖ್ಯತೆಯನ್ನು ಉತ್ತಮವಾಗಿ ದಾಖಲಿಸಲಾಗಿದೆ. ನ್ಯಾಯ ವಿಜ್ಞಾನ ತಂತ್ರಜ್ಞಾನದ ಅಭಿವೃದ್ಧಿಯು ಅಪರಾಧ ಪ್ರಕರಣಗಳನ್ನು ಭೇದಿಸಲು ಹಾಗೂ ಪರಿಹರಿಸಲು ಅಭೂತಪೂರ್ವ ಸಾಮರ್ಥ್ಯವನ್ನು ನೀಡಿದೆ ಹಾಗೂ ಕಾನೂನಿನ ಬಲವಾದ ತೋಳನ್ನು ಇನ್ನಷ್ಟು ಬಲಗೊಳಿಸಿದೆ. ಎಷ್ಟೋ ಪ್ರಕರಣಗಳಲ್ಲಿ ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಇಲ್ಲವಾದಾಗ ನ್ಯಾಯ ವಿಜ್ಞಾನದ ವೈಜ್ಞಾನಿಕ ಪುರಾವೆಗಳು ಹಾಗೂ ವರದಿಗಳು ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ನ್ಯಾಯ ವ್ಯವಸ್ಥೆಗೆ ನೆರವಾಗಿದೆ.
ಇದುವರೆಗೆ ಡಿ.ಎನ್.ಎ ಫಿಂಗರ್ ಪ್ರಿಂಟಿಂಗ್ ನಮಗೆ ಅಪರಿಚಿತ ಅಪರಾಧಿಗಳ ಗುರುತನ್ನು ನೀಡಿದರೆ, ಸೈಬರ್ ಫೊರೆನ್ಸಿಕ್ಸ್ ತಮ್ಮ ಎಲೆಕ್ಟ್ರಾನಿಕ್ ಸಾಧನಗಳ ಪರದೆಯ ಹಿಂದೆ ಅಡಗಿರುವ ಅಪರಾಧಿಯನ್ನು ನೋಡಲು ನಮಗೆ ಸಹಾಯ ಮಾಡಿದೆ. ಬದಲಾಗುತ್ತಿರುವ ಅಪರಾಧದ ಸ್ವರೂಪಗಳಿಗೆ ತಕ್ಕಂತೆ ಬದಲಾಗುತ್ತಿರುವ ನವ ತಂತ್ರಜ್ಞಾನಗಳ ಮುಖೇನ ತನಿಖಾಧಿಕಾರಿಗಳ ಬೆನ್ನೆಲು ಬಾಗಿ ನ್ಯಾಯ ವಿಜ್ಞಾನ ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿದೆ. ಅಪರಾಧವೆಂಬ ಒಗಟಿನ ವಿವಿಧ ತುಣುಕುಗಳನ್ನು ಜೋಡಿಸಲು ಹಾಗೂ ಅಪರಾಧಿಕ ಕಾನೂನು ಮತ್ತು ನ್ಯಾಯ ವ್ಯವಸ್ಥೆಯು ನಿರಾಕರಿಸಲಾಗದಂತಹ ವೈಜ್ಞಾನಿಕ ಪುರಾವೆಗಳನ್ನು ನೀಡುವಲ್ಲಿ ನ್ಯಾಯ ವಿಜ್ಞಾನ ಪ್ರಯೋಗಾಲಯದ ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆೆ.
ಯಾವುದೇ ಅಪರಾಧ ನಡೆದ ಸ್ಥಳಗಳಲ್ಲಿ ದೊರಕುವ ಪುರಾವೆಗಳ ಯಶಸ್ವೀ ವಿಶ್ಲೇಷಣೆಗೆ, ಸರಿಯಾದ ಸಂಗ್ರಹಣೆ ಮತ್ತು ಶೇಖರಣೆ ಅತ್ಯಗತ್ಯ ಹಾಗೂ ಬಹಳ ಮುಖ್ಯವಾಗಿರುತ್ತದೆ ಏಕೆಂದರೆ ಈ ಕುರುಹುಗಳು ಸರಿಯಾಗಿ ಸಂಗ್ರಹಿಸದಿದ್ದರೆ ಅವು ಕ್ಷೀಣಗೊಳ್ಳುತ್ತವೆ ಅಥವಾ ವೈಜ್ಷಾನಿಕ ಮೌಲ್ಯ ಕಳೆದುಕೊಳ್ಳುತ್ತವೆ. ಆದ್ದರಿಂದ ಸಾಕ್ಷಿಗಳ ಸರಿಯಾದ ಸಂಗ್ರಹ ಹಾಗೂ ನಿರ್ವಹಣೆಯ ಬಗ್ಗೆ ಹಾಗೂ ಪ್ರಮಾಣಿತ ಕಾರ್ಯವಿಧಾನಗಳ ಬಗ್ಗೆ ತನಿಖಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯದ ನ್ಯಾಯ ವಿಜ್ಞಾನ ವಿಜ್ಞಾನಿಗಳು ತರಬೇತಿಗಳನ್ನು ನಡೆಸುತ್ತಾರೆ.
ರಾಜ್ಯ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಪ್ರಕರಣಗಳಾದ ನಾಂದೇಡ್ ಎಕ್ಸ್ಪ್ರೆಸ್ ದುರಂತ, ಕರ್ನಾಟಕದ ನಂಜನಗೂಡು ಆಸ್ಪತ್ರೆಗಳಲ್ಲಿ ಮಕ್ಕಳ ವಿನಿಮಯ, ಎಂ.ಎಂ ಕಲಬುರ್ಗಿ ಹಾಗೂ ಗೌರೀ ಲಂಕೇಶ್ ಹತ್ಯೆ ಪ್ರಕರಣಗಳನ್ನು ಪರಿಹರಿಸುವಲ್ಲಿ ಕರ್ನಾಟಕ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯದ ವಿಜ್ಞಾನಿಗಳ ಪಾತ್ರ ಶ್ಲಾಘನೀಯವಾದದ್ದಾಗಿದೆ.
ಸಮಾಜದ ಪ್ರಗತಿಯು ತನ್ನ ನಾಗರೀಕರಿಗೆ ಸುರಕ್ಷೆಯನ್ನು ಒದಗಿಸುವ ಸಾಮರ್ಥ್ಯದ ಮೇಲೆ ಅವಲಂಭಿತವಾಗಿರುತ್ತದೆ. ಇದಕ್ಕಾಗಿ ಅಪರಾಧಿಗಳಿಗೆ ಅವರ ಅಪರಾಧಕ್ಕೆ ಶಿಕ್ಷೆಯಾಗುವುದು ಹಾಗೂ ಸಂತ್ರಸ್ಥರಿಗೆ ನ್ಯಾಯ ಸಿಗುವುದು ಮುಖ್ಯ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯದ ವಿಜ್ಞಾನಿಗಳು, ನ್ಯಾಯಲಯದಲ್ಲಿ ಶಿಕ್ಷೆಯ ಶೇಖಡಾ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ  ಸಹಾಯ ಮಾಡಿದ್ದಾರೆ. ಹೀಗಾಗಿ ಅವರು ಸುರಕ್ಷಿತ ಸಮಾಜವನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

×
ABOUT DULT ORGANISATIONAL STRUCTURE PROJECTS